ದೀಕ್ಷೆ 
ಗುರುಮುಖೇನ ವ್ಯಕ್ತಿ ವ್ರತನಿಯಮಗಳಿಗಾಗಿ ಅನುಮತಿ ಪಡೆದುಕೊಳ್ಳುವ ಕ್ರಿಯೆಗೆ ಈ ಹೆಸರಿದೆ. ಇದರ ಬಗ್ಗೆ ಸವಿಸ್ತಾರವಾದ ವಿವರಣೆ ಪ್ರಪಂಚಸಾರ, ಕುಲಾರ್ಣವ, ಶಾರದಾತಿಲಕ, ನಿತ್ಯೋತ್ಸವ, e್ಞÁನಾರ್ಣವ, ವಿಷ್ಣುಸಂಹಿತ, ಮಹಾನಿರ್ವಾಣ ಮುಂತಾದ ತಂತ್ರಗಳಲ್ಲಿಯೂ ಲಿಂಗಪುರಾಣದಲ್ಲಿಯೂ ಬಂದಿದೆ. ಈ ಗ್ರಂಥಗಳಲ್ಲೆಲ್ಲ ದೀಕ್ಷಾ ಶಬ್ದದ ಉತ್ಪತ್ತಿಯನ್ನು ದಾ (ಕೊಡು) ಮತ್ತು ಕ್ಷಿ (ನಾಶಗೊಳಿಸು) ಎಂಬ ಎರಡು ಪದಗಳಿಂದ ನಿರ್ಧರಿಸಲಾಗಿದೆ. ವ್ಯಕ್ತಿಗೆ ದೈವೀ ಸ್ಥಿತಿಯನ್ನು ಕೊಡುವುದರ ಜೊತೆಗೆ, ಅವನ ಎಲ್ಲ ಪಾಪಾಗಳನ್ನೂ ತೊಳೆದು ಸಂಸಾರ ಬಂಧನದಿಂದ ಅವನನ್ನು ಮುಕ್ತ ಮಾಡುವುದರಿಂದ ಇದಕ್ಕೆ ದೀಕ್ಷೆ ಎಂಬ ಹೆಸರು ಬಂದಿರುವುದಾಗಿ ಕುಲಾರ್ಣವದಲ್ಲಿಯೂ ಶಾರದಾತಿಲಕದಲ್ಲಿಯೂ ಹೇಳಿದೆ. 
ದೀಕ್ಷೆಯಲ್ಲಿ 1 ಕ್ರಯಾವತಿ, 2 ವರ್ಣಮಯಿ, 3 ಕಲಾವತಿ ಮತ್ತು 4 ವೇಧಾಮಯಿ ಎಂದು ನಾಲ್ಕು ವಿಧಗಳಿವೆ. ಮಹಾನಿರ್ವಾಣದಲ್ಲಿ ಶಾಕ್ತ ಶೈವ, ವೈಷ್ಣವ, ಸೌರ, ಅಥವಾ ಗಣತೇಯ ಶಿಷ್ಯರಿಗೆ ದೀಕ್ಷೆ ಕೊಡುವು ಗುರು ಆಯಾ ಪಂಥದವನೇ ಇರಬೇಕೆಂದು ಹೇಳದೆಯಾದರೂ `ಕೌಲ ಮಾತ ಎಲ್ಲ ಪಂಥದವರಿಗೂ ದೀಕ್ಷೆ ಕೊಡಲು ಅರ್ಹನಾದ ಗುರುವಾಗಿದ್ದನೆಂದು ತಿಳಿಸುತ್ತದೆ. 

ದೀಕ್ಷಾ ಸಂಸ್ಕಾರವಿಲ್ಲದೆ ಮೋಕ್ಷವಿಲ್ಲ. ಆಚಾರ್ಯನಿಲ್ಲದೆ (ಗುರು) ದೀಕ್ಷೆ ನಡೆಯುವುದಿಲ್ಲ. ಗುರು ಮಂತ್ರೋಪದೇಶ ಮಾಡದೆ, ಅದು ಫಲಕಾರಿಯಾಗುವುದಿಲ್ಲ. ದೀಕ್ಷೆ ಪಡೆಯದ ವ್ಯಕ್ತಿಗೆ ಸಿದ್ಧಿಯಾಗಲಿ, ಮೋಕ್ಷವಾಗಲಿ ಲಭ್ಯವಾಗುವುದು ಸಾಧ್ಯವೆ ಇಲ್ಲ. ಆದುದರಿಂದಲೇ ಪ್ರತಿಯೊಬ್ಬನೂ ಗುರುವಿನಿಂದ ದೀಕ್ಷೆ ಪಡೆಯಲೇಬೇಕು. ದೀಕ್ಷೆ ಪಡೆದ ಮೇಲೆ ಬ್ರಾಹ್ಮಣ ಶೂದ್ರರೆಂಬ ಜಾತಿ ಭೇದವೇ ಅಳಿದು ಹೋಗುತ್ತದೆ. ಇತ್ಯಾದಿ ವಿಷುಯಗಳನ್ನು ಶಿವನೇ ಕಲಿಸಿದನೆಂದು ಕುಲಾರ್ಣವದಲ್ಲಿ ಹೇಳಲಾಗಿದೆ.
ಪಾರಾನಂದ ಸೂತ್ರದಲ್ಲಿ ಬ್ರಾಹ್ಮಣ ಗುರು ಮತ್ತು ಕ್ಷತ್ರಿಯ ಗುರುಗಳು ಶಿಷ್ಯರಿಗೆ ಕೊಡುವ ದೀಕ್ಷಾ ಕ್ರಮಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದೆ. ಬ್ರಾಹ್ಮಣಗುರು ಶಿಷ್ಯನಿಗೆ ಮಂತ್ರೋಪದೇಶ ಮಾಡುವಾಗ, ತನ್ನ ಬಾಯಿಯಲ್ಲಿರುವ ಜಲವನ್ನು ತನ್ನ ಶಿಷ್ಯನ ಬಾಯಿಯಲ್ಲಿ ಹಾಕುತ್ತಾನೆ. ಆ ನೀರನ್ನು ಸ್ವೀಕರಿಸುತ್ತಿದ್ದಂತೆಯೇ ಶಿಷ್ಯ ಮಂತ್ರೋಪದೇಶ ಪಡೆಯುತ್ತಾನೆ. ಕ್ಷತ್ರಿಯ ಗುರು ತನ್ನ ಶಿಷ್ಯನ ಬಲಗಿವಿಯಲ್ಲಿ ಮಂತ್ರೋಪದೇಶ ಮಾಡುತ್ತಾನೆ.

ಗ್ರಹಣಕಾಲವೇ ಮಂತ್ರೋಪದೇಶಕ್ಕೆ ಅತ್ಯುತ್ತಮಕಾಲವೆಂದು ಹೇಳುತ್ತಾರೆ. ಆಗ, ವಾರ ತಿಥಿ ನಕ್ಷತ್ರಗಳನ್ನು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ.

ವೇದಕಾಲದಲ್ಲಿ ದೀಕ್ಷೆ ಮತ್ತು ಉಪನಯನ ಸಂಸ್ಕಾರಗಳಲ್ಲಿ ವ್ಯತ್ಯಾಸವೇ ಇರಲಿಲ್ಲ. ತಂತ್ರಗಳ ಕಾಲಕ್ಕೆ, ದೀಕ್ಷಾ ಸಂಸ್ಕಾರದಿಂದಲೇ ಸಿದ್ಧಿ ಮತ್ತು ಮೋಕ್ಷಗಳು ಸಾಧ್ಯವೆಂದು ತಿಳಿಯಲಾಯಿತು. ಇವೆರಡರ ಮುಖ್ಯ ಉದ್ದೇಶ ಒಂದೇ ಆಗಿದ್ದು ಅದು ವ್ಯಕ್ತಿಗೆ ಪುನರ್ಜನ್ಮವನ್ನು ಕೊಟ್ಟು ದ್ವಿಜನನ್ನಾಗಿ ಮಾಡುವುದೇ ಆಗಿದೆ.
ಬ್ರಾಹ್ಮಣರಲ್ಲಿ ಉಪನಯನ ಸಂಸ್ಕಾರಕ್ಕಿರುವಷ್ಟೇ ಹೆಚ್ಚಿನ ಮಹತ್ತ್ವ ವೀರಶೈವರಲ್ಲಿ ದೀಕ್ಷೆಗೆ ಇದೆ. ಆತ್ಮವಿಶ್ವಾಸಕ್ಕೆ ಮತ್ತು ಸರ್ವೋನ್ನತ ಧ್ಯೇಯವನ್ನು ಸಾಧಿಸಿಲಿಕ್ಕೆ ದೀಕ್ಷೆ ಅತ್ಯಂತ ಅವಶ್ಯಕವೆಂದು ವೀರಶೈವರಲ್ಲಿ ನಂಬುಗೆ. ಶೈವ ಸಿದ್ಧಾಂತ ದೀಕ್ಷೆಯನ್ನು ಮಾನ್ಯ ಮಾಡಿದೆ. ವೀರಶೈವನಾದವನಿಗಂತೂ ದೀಕ್ಷೆ ಅತ್ಯಾವಶ್ಯಕ. ದೀಕ್ಷಾ ಸಂದರ್ಭದಲ್ಲಿ ಲಿಂಗಧಾರಣೆಯೂ ನಡೆಯುತ್ತದೆ. ಈ ಸಂಸ್ಕಾರದ ಮೂಲಕ ವ್ಯಕ್ತಿ ವೀರಶೈವ ಆಚರಣೆಗಳನ್ನು ನಿರ್ವಹಿಸುವ ಅಧಿಕಾರವನ್ನು ಪಡೆಯುತ್ತಾನೆ. ವೀರಶೈವೇತರರೂ ದೀಕ್ಷಾನಂತರ ವೀರಶೈವರೇ ಆಗುತ್ತಾರೆ.

ವೀರಶೈವರಲ್ಲಿ ಮಗು ಜನಿಸಿದ ಕೂಡಲೇ ಲಿಂಗದೀಕ್ಷೆಯನ್ನು ಮಾಡಿಸುತ್ತಾರೆ. ಭೀಮಕವಿಯಿಂದ (13-14ನೆಯ ಶತಮಾನ) ರಚಿತವಾದ ಬಸವಪುರಾಣದಲ್ಲಿ ಬಸವಣ್ಣ ಹುಟ್ಟಿದ ಕೂಡಲೇ ಲಿಂಗಧಾರಣೆಯಾಯಿತೆಂದು ಹೇಳಿದೆ. ಮಗು ಗರ್ಭದಲ್ಲಿರುವಾಗಲೇ ಗರ್ಭಕ್ಕೆ ಲಿಂಗಧಾರಣೆ ಮಾಡುವ ಪದ್ಧತಿಯೂ ಇದೆ. ಕಾಲಕ್ರಮೇಣ ಲೀಗದೀಕ್ಷೆಯನ್ನು ಬಾಲಕನ ಜನನವಾದ ಕೂಡಲೇ ಒಮ್ಮೆ ಮತ್ತು ಬಾಲಕ ಎಂಟು ವರ್ಷದವನಾದಾಗ ಮತ್ತೊಮ್ಮೆ ಹೀಗೆ ಎರಡು ಬಾರಿ ಮಾಡುವ ಕ್ರಮ ರೂಢಿಗೆ ಬಂದಿದೆ. ಇದಲ್ಲದೆ ವೀರಶೈವನಾದವ ಎಲ್ಲವನ್ನೂ ತ್ಯಜಿಸಿ, ವಿರಕ್ತ ಭಾವನೆಯಿಂದ ಸಂನ್ಯಾಸಿಯಾಗುವಾಗಲೂ ದೀಕ್ಷಾ ಸಂಸ್ಕಾರ ಪಡೆಯುತ್ತಾನೆ. ಆದರೆ ಇವುಗಳೆಲ್ಲೆಲ್ಲ ಅತ್ಯಂತ ಪ್ರಾಮುಖ್ಯವಿರುವುದು ಮೊದಲನೆಯದಕ್ಕೆ ಮಾತ್ರ.

ಈ ಸಂಸ್ಕಾರಕ್ಕೆ ಜಂಗಮ ವರ್ಗದಲ್ಲಿ ಅಯ್ಯಾಚಾರವೆಂಬ ಹೆಸರಿದೆ. ದೀಕ್ಷಾ ಸಂಸ್ಕಾರಕ್ಕೆ ಒಂದು ವಿಧಾನವಿದೆ. ಶಿಶುವಿನ ಜನನವಾದ ಕೂಡಲೇ ಮನೆತನದ ಆಚಾರ್ಯನೆನಿಸಿದವನು (ಜಂಗಮ) ಬಂದು ಮಗುವಿಗೆ ವಿಭೂತಿ ಧಾರಣ ಮಾಡಿ ಲಿಂಗವನ್ನು ಕಟ್ಟುತ್ತಾನೆ. ರುದ್ರಾಕ್ಷಿ ಸರವನ್ನು ಕೊರಳಲ್ಲಿ ಹಾಕಿ ಮಗುವಿನ ಕಿವಿಯಲ್ಲಿ ಪಂಚಾಕ್ಷರೀ ಮಂತ್ರವನ್ನು ಉಚ್ಚರಿಸುತ್ತಾನೆ. ಭೂಮಿಗೆ ಅವತರಿಸಿದ ಕೂಡಲೇ ಈ ಮಂತ್ರೋಚ್ಚಾರಣೆಯನ್ನು ಕೇಳಿದರೆ ಜೀವಿಗೆ ಶಿವ ಜೀವರ ಸಂಬಂಧ ಅತ್ಯಂತ ನಿಕಟವಾಗುವುದೆಂದು ನಂಬಿಕೆ. ಲಿಂಗದೀಕ್ಷಾನಂತರ ಜಂಗಮ ಪಾದೋದಕವನ್ನು ಮಾಡಿ ಲಿಂಗಕ್ಕೆ ಎರೆದು ಮಗುವಿಗೂ ಅದನ್ನು ಕೊಡುತ್ತಾರೆ. ಆಮೇಲೆ ಜಂಗಮರಿಗೆ ತೃಪ್ತಿಯಾಗುವಂತೆ ಉಣಬಡಿಸುತ್ತಾರೆ. ಇಪ್ಪತ್ತು ಮೂವತ್ತು ಜನರಿಗೆ ಏಕಕಾಲದಲ್ಲಿ ಈ ದೀಕ್ಷೆಯನ್ನು ಕೊಡಬಹುದು. ಈ ಸಂಸ್ಕಾರಾನಂತರವೇ ವ್ಯಕ್ತಿಗೆ ಸಮಾಜದಲ್ಲಿ ಉಚ್ಚಸ್ಥಾನಮಾನಗಳು ದೊರೆಯುತ್ತವೆ.

ಗುರು ಶಿಷ್ಯನಿಗೆ ದೀಕ್ಷೆಯನ್ನು ಕೊಡುವಾಗ ಅವನಿಂದ ಕೆಲವು ವಚನಗಳನ್ನು ತೆಗೆದುಕೊಳ್ಳುತ್ತಾನೆ. ಸಚ್ಚರಿತನಾಗಿರಬೇಕೆಂದು ತೆಗೆದುಕೊಳ್ಳುವ ವಚನಕ್ಕೆ ಆe್ಞÁಧೀಕ್ಷೆ ಎಂದೂ ಪರಂಪರಾಗತವಾಗಿ ಬಂದ ನಿಯಮಗಳೆಲ್ಲವನ್ನೂ ಪರಿಪಾಲಿಸುವನೆಂದು ತೆಗೆದುಕೊಳ್ಳುವ ವಚನಕ್ಕೆ ಉಪಾಮದೀಕ್ಷೆ ಎಂದು ಹೆಸರು. ಇಂಥ ಸುಮಾರು ಇಪ್ಪತ್ತೇಳು ದೀಕ್ಷೆಗಳ ಹೆಸರುಗಳನ್ನು ಸಂಗನ ಬಸವನ ವಚನಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೆಲವರು ಇಂಥ ದೀಕ್ಷೆಗಳು ಕೇವಲ ಏಳು ಎಂದು ಹೇಳುತ್ತಾರೆ. ವಚನಗಳನ್ನು ತೆಗೆದುಕೊಂಡ ಅನಂತರ ಶಿಷ್ಯ ಪಂಚಗವ್ಯವನ್ನು ಸ್ವೀಕರಿಸಬೇಕು. ತದನಂತರ ಗುರು ಶಿಷ್ಯನ ಕಣ್ಣಿನಲ್ಲಿ ತನ್ನ ಯೋಗದೃಷ್ಟಿಯನ್ನು ನಿಲ್ಲಿಸಿ, ಅವನ ಚೈತನ್ಯವನ್ನೆಲ್ಲಾ ಆಕರ್ಷಿಸಿ, ಅಂತರಂಗದಲ್ಲಿ ಪ್ರಾಣ ಮತ್ತು ಭಾವಲಿಂಗಗಳನ್ನು ಪ್ರತಿಷ್ಠಾಪಿಸುವನ್ನಲ್ಲದೆ ಅಷ್ಟಾವರಣಗಳನ್ನು ಭೋದಿಸುವನು. ಈ ಸಂಸ್ಕಾರದಿಂದ ಶಿಷ್ಯ ಅಂತರಂಗ ಬಹಿರಂಗ ಶುದ್ಧಿಯನ್ನು ಪಡೆದು, ಇಷ್ಟಲಿಂಗ ಸಾಧನೆಯ ಮೂಲಕ ಜೀವ ಶಿವರ ಐಕ್ಯ ಪಡೆಯುವನೆಂದು ನಂಬಲಾಗಿದೆ. ಗುರತು ಇಷ್ಟಲಿಂಗವನ್ನು ಶಿಷ್ಯನಿಗೆ ಕೊಡುವಾಗ ಈ ಲಿಂಗವೇ ಮುಕ್ತಿಗೆ ಸಾಧನವೆಂದೂ ಎಲ್ಲ ತತ್ತ್ವಗಳಿಗಿಂತ ಅಧಿಕ ತರವಾದುದೆಂದೂ ಸರ್ವದಾ ಇದು ದೇಹದ ಮೇಲಿರಬೇಕೆಂದು ಭೋದಿಸುತ್ತಾನೆ. 

ದೀಕ್ಷಾ ಸಂಸ್ಕಾರ ಬೇರೆ ಜಾತಿಗಳಲ್ಲಿಯೂ ವಾಡಿಕೆಯಲ್ಲಿದೆ. ಉನ್ನತ ಮಠಾಧಿಪತಿಗಳು ನಡೆ, ನುಡಿ, ಮತ್ತು ಅನುಷ್ಠಾನಗಳಲ್ಲಿ ಗಣ್ಯರೆಂದು ಕಂಡುಬಂದ ವ್ಯಕ್ತಿಗಳಿಗೆ ಅವರ ಅಪೇಕ್ಷೆಯಂತೆ ಕಾವಿ ಬಟ್ಟೆಯನ್ನೂ ರುದ್ರಾಕ್ಷಿ ಮಾಲೆಯನ್ನೂ ಕೊಡುವುದರ ಮೂಲಕ ದೀಕ್ಷೆಯನ್ನು ದಯಪಾಲಿಸುತ್ತಾರೆ. 		(ಎಸ್.ಎಲ್.ಎ.ಐ.; ಬಿ.ಎಸ್.; ವಿ.ಟಿ.ಟಿ.ಎನ್.)

ದೀಕ್ಷಾದಾನ: ಕ್ರೈಸ್ತಧರ್ಮದಲ್ಲಿ ಒಂದು ವ್ಯಕ್ತಿ ತನ್ನ ಜೀವನವನ್ನು ಸಂಪೂರ್ಣವಾಗಿ ಪರಮಾತ್ಮನ ಸೇವೆಗೆ ಮುಡಿಪಾಗಿಡುವುದನ್ನು ವಿಧಿಬದ್ಧಗೊಳಿಸುವುದಕ್ಕೆ ದೀಕ್ಷಾದಾನವೆನ್ನಲಾಗುವುದು (ಕಾನ್ಸೆಕ್ರೇಷನ್). ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷ ಕೆಲವು ವಿಶಿಷ್ಟ ವಿಧಿಗಳನ್ನು ಆಚರಿಸಿ ವಿಶೇಷ ಪ್ರಾರ್ಥನೆಗಳನ್ನು ನಡೆಸುತ್ತಾನೆ. ಧರ್ಮಾಧ್ಯಕ್ಷಪದಾರ್ಥಿ ಹಾಗೂ ಸಂನ್ಯಾಸಾರ್ಥಿಗಳಿಗೆ ಹೀಗೆ ವಿಧ್ಯುಕ್ತವಾಗಿ ದೀಕ್ಷಾದಾನ ಕೊಡಲಾಗುವುದು.

ದೀಕ್ಷಾದಾನದ ಮೊದಲು ನಡೆಯುವ ವಿಧಿಗಳಲ್ಲಿ ಧರ್ಮಾಧ್ಯಕ್ಷನಾಗಲಿರುವವ ಧರ್ಮ ಸಭೆಗೆ ನಿಷ್ಠೆಯುಳ್ಳವನಾಗಿದ್ದು ಅದರ ಬೋಧನೆಯನ್ವಯ ಜೀವಿಸುತ್ತೇನೆಂದು ವಾಗ್ದಾನ ಮಾಡಬೇಕು. ಅನಂತರ ದೀಕ್ಷಾದಾನ ಮಾಡುವ ಧರ್ಮಾಧ್ಯಕ್ಷ ಇನ್ನಿಬ್ಬರು ಧರ್ಮಾಧ್ಯಕ್ಷರೊಡನೆ ದೀಕ್ಷಾರ್ಥಿಯ ಮೇಲೆ ಕೈಗಳನ್ನಿಟ್ಟು ವಿಧಿವತ್ತಾಗಿ ಪ್ರಾರ್ಥಿಸುತ್ತಾನೆ. ಪವಿತ್ರ ತೈಲಗಳಿಂದ ದೀಕ್ಷಾರ್ಥಿಯ ಕೈಗಳಿಗೆ ಅಭ್ಯಂಗನವಾಗುತ್ತದೆ. ಪದವಿಯ ಸಂಕೇತವಾದ ಧರ್ಮದಂಡ ಮುಂತಾದವನ್ನು ದೀಕ್ಷೆಪಡೆದವರಿಗೆ ಒಪ್ಪಿಸುವುದರ ಮೂಲಕ ವಿಧಿ ಮುಕ್ತಾಯಗೊಳ್ಳುತ್ತದೆ.

ಹೀಗೆ ಧರ್ಮಾಧ್ಯಕ್ಷ ಪದವನ್ನು ಪಡೆದವರು ಕ್ರಿಸ್ತನ ಪ್ರವರ್ತಕರ (ಅಪಾಸಲ್ಸ್) ಉತ್ತರಾಧಿಕಾರಿಗಳೆಂದು ಪರಿಗಣಿಸಲಾಗುತ್ತದೆ. ಅಧಿಕಾರವಾಣಿಯಿಂದ ಬೋಧಿಸುವ ಗುರುದೀಕ್ಷಾರ್ಥಿಗಳಿಗೆ ದೀಕ್ಷಾದಾನ ಮಾಡುವ, e್ಞÁನಸ್ನಾನ, ಪಾಪಕ್ಷಮೆ ಮುಂತಾದ ಕ್ರೈಸ್ತಧರ್ಮದ ಸಂಸ್ಕಾರಗಳನ್ನು ವಿವರಿಸುವ ಅಧಿಕಾರವನ್ನು ತನ್ನ ಸಹೋದ್ಯೋಗಿಗಳಾದ ಗುರುಗಳಿಗೆ ನೀಡುವ ಅಧಿಕಾರ ದೀಕ್ಷಾದಾನ ಪಡೆದ ವ್ಯಕ್ತಿಗೆ ಲಭಿಸುತ್ತದೆ. 

ಮಠದಲ್ಲಿ ಅಜೀವಪರ್ಯಂತ ಜೀವಿಸಿ ಬಾಳನ್ನು ಪರಮಾತ್ಮನಿಗೆ ಸಮರ್ಪಿಸಲು ನಿರ್ಧರಿಸುವ ಮಹಿಳೆಗೂ ದೀಕ್ಷಾದಾನ ಮಾಡಲಾಗುತ್ತಿದೆ. ಆಕೆ ವಿರಕ್ತೆಯಾಗಿರಲು, ಬಡತನದಲ್ಲಿ ಜೀವಿಸಲು ಹಾಗೂ ಅಧಿಕಾರಿಗಳಿಗೆ ವಿಧೇಯಳಾಗಿ ನಡೆಯಲು ವಾಗ್ದಾನ ಮಾಡಬೇಕು. ಈ ದೀಕ್ಷೆಗೂ ಧರ್ಮಾಧ್ಯಕ್ಷರ ದೀಕ್ಷೆಗೂ ಮೂಲಭೂತವಾದ ಭೇದವಿದೆ.

ಗುರುದೀಕ್ಷೆ: ಕ್ರೈಸ್ತಧರ್ಮದಲ್ಲಿ ಗುರುದೀಕ್ಷೆಯ (ಆರ್ಡಿನೇಷನ್) ಸಂಸ್ಕಾರ ಆ ಧರ್ಮದಷ್ಟೇ ಪುರಾತನ. ಇದರ ವಿಧಿಗಳಲ್ಲಿ ಮಾತ್ರ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ಆಗಿರುವುದನ್ನು ಕಾಣಬಹುದು. ಕ್ರಿಸ್ತ ಕೊನೆಯ ಭೋಜನದ ವೇಳೆಯಲ್ಲಿ ತನ್ನ ಶಿಷ್ಯರನ್ನು ತನ್ನ ನೂತನ ಧರ್ಮದ ನೇಕಾರರಾಗಿ ಪದವಿಧಾನ ಮಾಡಿರುವುದನ್ನು ಸುಸಂದೇಶಗಳಲ್ಲಿ (ಗಾಸ್ಪೆಲ್ಸ್) ಸ್ಪಷ್ಟವಾಗಿ ಹೇಳಲಾಗಿದೆ. ಹೀಗೆ ಕ್ರೈಸ್ತನಿಂದ ಗುರುದೀಕ್ಷೆ ಪಡೆದ ಶಿಷ್ಯರು ಲೋಕ ಸಂಚಾರ ಮಾಡುತ್ತ ಧರ್ಮಪ್ರಚಾರದಲ್ಲಿ ತೊಡಗಿದ್ದಾಗ ತಮ್ಮ ಶಿಷ್ಯರಿಗೆ ಕ್ರಿಸ್ತದತ್ತ ಪದವಿಯನ್ನು ಪ್ರದಾನಿಸಿದರೆಂಬುದು ಕ್ರೈಸ್ತ ಇತಿಹಾಸದಿಂದ ತಿಳಿದುಬರುತ್ತದೆ. ಅವರು ಈ ಸಂದರ್ಭದಲ್ಲಿ ಪ್ರಧಾನವಾಗಿ ಬಳಸಿದ ಸಂಕೇತವೆಂದರೆ - ತಮ್ಮ ಅನುಯಾಯಿಗಳ ಮೇಲೆ ಕೈಗಳನ್ನೀಡುವುದು. ಈಗಲೂ ಈ ಪರಂಪರಾಗತ ಸಂಕೇತ ಗುರುದೀಕ್ಷಾದಾನದ ಪ್ರಮುಖ ಅಂಗ. ಅದರ ಜೊತೆಗೆ ದೀಕ್ಷಾದಾನ ಮಾಡುವ ಧರ್ಮಾಧ್ಯಕ್ಷ ಹೇಳುವ ಪ್ರಾರ್ಥನೆಯೂ ಅಷ್ಟೆ ಮುಖ್ಯ. ಸರ್ವಶಕ್ತ ದೇವರೆ, ನಿಮ್ಮ ಈ ಸೇವಕರಿಗೆ ಗುರುತ್ವದ ಅಂತಸ್ತನ್ನು ಕರುಣಿಸಿದರೆಂದು ನಿಮ್ಮನ್ನು ಬೇಡುತ್ತೇವೆ. ಅವರ ಹೃದಯದಲ್ಲಿ ಪಾವಿತ್ರ್ಯವನ್ನು ಸಚೇತನಗೊಳಿಸಿ.... ಇತ್ಯಾದಿ.

ಹೀಗೆ ಗುರುದೀಕ್ಷೆ ಪಡೆದ ವ್ಯಕ್ತಿ ಧರ್ಮಾಧ್ಯಕ್ಷನ ಸಹಕಾರಿಯಾಗಿದ್ದು ಬಲಿಪೂಜೆ ಒಪ್ಪಿಸುವ, ಪಾಪಕ್ಷಮೆ ನೀಡುವ, e್ಞÁನಸ್ನಾನ, ಅಭ್ಯಂಗ, ವಿವಾಹವೇ ಮುಂತಾದ ಸಂಸ್ಕಾರಗಳನ್ನು ಕ್ರೈಸ್ತ ಭಕ್ತರಿಗೆ ವಿತರಿಸುವ ಅಧಿಕಾರವನ್ನು ಪಡೆಯುತ್ತಾನೆ. ಜನಸೇವಾನಿರತರಾಗಿರಬೇಕೆಂಬುದೂ ಈ ದೀಕ್ಷೆಯ ಇನ್ನೊಂದು ಪ್ರಮುಖ ಆಶಯ. 			
	(ಡಿ.ಪಿ.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ